7/21/2020

ಕ್ರೀಸ್‌ಗೆ ಬಂದ ಕೂಡಲೇ ಸಿಕ್ಸರ್‌ ಬಾರಿಸಿದ್ದ ಭಾರತದ ಯುವ ಪ್ರತಿಭೆಯನ್ನು ನೆಚ್ಚಿಕೊಂಡ ಸ್ವಾನ್!

ಮುಂಬೈ: ಇಂಗ್ಲೆಂಡ್‌ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಫ್ ಸ್ಪಿನ್ನರ್‌ ಆಗಿರುವ ಮಾಜಿ ಕ್ರಿಕೆಟಿಗ ಗ್ರೇಮ್‌ ಸ್ವಾನ್‌, ತಾವು ಟೀಮ್‌ ಇಂಡಿಯಾದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರ ಬ್ಯಾಟಿಂಗ್‌ ಶೈಲಿಗೆ ಮಾರು ಹೋಗಿರುವುದಾಗಿ ಹೇಳಿಕೊಂಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ನ ಕ್ರಿಕೆಟ್‌ ಕನೆಕ್ಟೆಡ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಸ್ವಾನ್‌, 21 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಪಂತ್‌ಗೆ ತಮ್ಮ ಸ್ವಾಭಾವಿಕ ಬ್ಯಾಟಿಂಗ್‌ ಆಡುವಂತೆ ನಾಯಕ ವಿರಾಟ್‌ ಕೊಹ್ಲಿ ಬಂಬಲ ನೀಡಬೇಕು ಎಂದಿದ್ದಾರೆ.



"ಭಾರತೀಯ ಯುವ ಆಟಗಾರರ ಬಗ್ಗೆ ಮಾತನಾಡುವುದಾದರೆ ರಿಷಭ್‌ ಪಂತ್‌ ಹೆಸರು ಮೊದಲು ಬರುತ್ತದೆ. ಆತನ ಬ್ಯಾಟಿಂಗ್‌ ಶೈಲಿಗೆ ನಾನು ಮಾರುಹೋಗಿದ್ದೇನೆ. ಸಹಜವಾಗಿಯೇ ಅವರಿಗೆ ತಂಡದ ಹಿರಿಯ ಆಟಗಾರರ ಬೆಂಬಲ ಕೂಡ ಲಭ್ಯವಾಗುತ್ತಿದೆ," ಎಂದು ಸ್ವಾನ್‌ ಹೇಳಿದ್ದಾರೆ.
ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವುದರಲ್ಲಿ ಎತ್ತಿದ ಕೈ ಎಂದು ಇದೇ ಕಾರ್ಯಕ್ರಮದಲ್ಲಿ ಮಾಜಿ ಆಲ್‌ರೌಂಡರ್ ಇರ್ಫಾನ್‌ ಪಠಾಣ್‌ ಹೇಳಿದ ಬಳಿಕ ಸ್ವಾನ್‌ ಈ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ವಿಚಾರದಲ್ಲಿ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್‌ ಗಂಗೂಲಿ ನಡುವೆ ಸಾಮ್ಯತೆ ಇದೆ ಎಂದು ಪಠಾಣ್‌ ಹೇಳಿದ್ದರು.

2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ರಿಷಭ್‌ ಒಂತ್‌, ಬಳಿಕ ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಪ್ರವಾಸಗಳಲ್ಲಿನ ಟೆಸ್ಟ್‌ ಕ್ರಿಕೆಟ್‌ ಸರಣಿಗಳಲ್ಲಿ ಪಂತ್‌ ಶತಕ ಬಾರಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವಿಕೆಟ್‌ಕೀಪರ್‌ ಎನಿಸಿದ್ದರು.


ಈ ನಡುವೆ ಪಂತ್‌ ಅವರ ಬ್ಯಾಟಿಂಗ್‌ ಕಣ್ಣಾರೆ ಕಂಡ ಕ್ಷಣವನ್ನು ಸ್ವಾನ್‌ ಸ್ಮರಿಸಿದ್ದಾರೆ. 2018ರಲ್ಲಿ ಇಂಗ್ಲೆಂಡ್‌ ಪ್ರವಾಸದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಪಂತ್‌ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದ ಪಂತ್‌, ಆಫ್‌ ಸ್ಪಿನ್ನರ್‌ ಮೊಯೀನ್‌ ಅಲಿ ಅವರ ಬೌಲಿಂಗ್‌ನಲ್ಲಿ ಎದುರಿಸಿದ ಎರಡನೇ ಎಸೆತವನ್ನು ವಿಕೆಟ್‌ ನೇರವಾಗಿ ಸಿಕ್ಸರ್‌ ಬಾರಿಸಿದ್ದರು.
"ಇಂಗ್ಲೆಂಡ್‌ನಲ್ಲಿ ಅವರು ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಕ್ಷಣ ನನಗೆ ಈಗಲೂ ನೆನಪಿದೆ. ಎದುರಿಸಿದ ಮೊದಲ ಅಥವಾ ಎರಡನೇ ಎಸೆತದಲ್ಲಿ ಅವರು ಸ್ಪಿನ್ನರ್‌ ಎದುರು ನೇರವಾಗಿ ಸಿಕ್ಸರ್‌ ಬಾರಿಸಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈತ ವಿಶೇಷ ಆಟಗಾರ ಎಂಬುದು ನನಗೆ ಆಗಲೇ ಅರಿವಾಗಿತ್ತು. ಖಂಡಿತವಾಗಿ ಈ ಆಟಗಾರನಿಗೆ ಬೆಂಬಲದ ಅಗತ್ಯವಿದೆ. ಅಂದಹಾಗೆ ಭಾರತ ತಂಡದಲ್ಲಿ ಅವರನ್ನು ಬೆಂಬಲಿಸುವವರೂ ಇದ್ದಾರೆ," ಎಂದು ಸ್ವಾನ್‌ ಹೇಳಿದ್ದಾರೆ.
ಈ ಮಧ್ಯೆ ಕಳೆದ ವರ್ಷ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಎಂಎಸ್‌ ಧೋನಿ ಅನಿರ್ದಿಷ್ಟಾವಧಿಯ ವಿಶ್ರಾಂತಿ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಿಕ್ಕಂತಹ ಹಲವು ಅವಕಾಶಗಳನ್ನು ಸದ್ಬಳಕೆ ಮಾಡಿ ತಮ್ಮ ಸ್ಥಾನವನ್ನ ಭದ್ರ ಪಡಿಸಿಕೊಳ್ಳುವಲ್ಲಿ ಪಂತ್‌ ವಿಫಲರಾಗಿದ್ದಾರೆ.

ಸ್ಥಿರ ಪ್ರದರ್ಶನದ ಕೊರತೆ ಕಾರಣ ಇದೇ ವರ್ಷ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡುವ ಹನ್ನೊಂದರಿಂದ ಹೊರಬಿದ್ದ ಪಂತ್‌, ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಮರಳಿ ಸ್ಥಾನ ಪಡೆಯಲು ಪರದಾಟ ನಡೆಸಿದ್ದಾರೆ. ಅವರ ಜಾಗದಲ್ಲಿ ಕೆಎಲ್‌ ರಾಹುಲ್‌ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡಕ್ಕೆ ನೂತನ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಲಭ್ಯವಾಗಿದ್ದಾರೆ. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದರಲ್ಲೂ ವಿದೇಶಿ ಪಿಚ್‌ಗಳಲ್ಲಿ ಪಂತ್‌ ಈಗಲೂ ಮೊದಲ ಆಯ್ಕೆಯ ವಿಕೆಟ್‌ಕೀಪರ್‌ ಆಗಿದ್ದಾರೆ.


ಕಾಮೆಂಟ್‌ಗಳಿಲ್ಲ:

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...