ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ತಾವು ಕೋಚ್ ಆಗಿ ಮಾಡಿದ ಕಾರ್ಯವು ತೃಪ್ತಿಕರವಾಗಿತ್ತು ಆದರೆ ನಿರ್ಗಮನ ಬೇರೆ ರೀತಿಯಲ್ಲಿ ಆಗಬೇಕಿತ್ತು ಎಂದು ಕ್ರಿಕೆಟಿಗ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
2017ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಂತರ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ ಕೋಚ್ ಹುದ್ದೆ ತೊರೆದಿದ್ದರು.
’ಆ ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಕೆಲವು ಮಹತ್ವದ ಕಾಣಿಕೆಗಳನ್ನು ಕ್ರಿಕೆಟ್‌ಗೆ ನೀಡಿದ ತೃಪ್ತಿ ನನಗಿದೆ. ಅದರಿಂದಾಗಿ ಯಾವುದೇ ಕೊರಗು ಇಲ್ಲ. ಅಲ್ಲಿಂದ ನಿರ್ಗಮಿಸಿದ್ದು ಕೂಡ ಖುಷಿಯ ಸಂಗತಿಯೇ ಆಗಿತ್ತು‘ ಎಂದು ಕುಂಬ್ಳೆ ಜಿಂಬಾಬ್ವೆ ಕ್ರಿಕೆಟಿಗ ಪಾಮೀ ಎಂಬಾಂಗ್ವಾ ಅವರೊಂದಿಗೆ ಆನ್‌ಲೈನ್ ಸಂವಾದದಲ್ಲಿ ಹೇಳಿದ್ದಾರೆ.
’ನಿರ್ಗಮನವು ವಿಭಿನ್ನವಾಗಿರಬೇಕಿತ್ತು. ಆದರೆ ಒಬ್ಬ ಕೋಚ್ ಆಗಿದ್ದವರಿಗೆ ತಮ್ಮ ಸ್ಥಾನದಿಂದ ಯಾವಾಗ ಹೊರನಡೆಯಬೇಕು ಎಂಬ ಅರಿವು ಇರಬೇಕು. ಅದು ಚಲನಶೀಲತೆಯ ದ್ಯೋತಕ. ಆ ಒಂದು ವರ್ಷದಲ್ಲಿ ನಾನು ಮಹತ್ವದ ಪಾತ್ರ ವಹಿಸಿದ್ದೆ ಎಂಬುದು ಸಂತಸದ ವಿಷಯ‘ ಎಂದು 49 ವರ್ಷದ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಿಗ ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ 17 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿತ್ತು. ಅಗ್ರಸ್ಥಾನಕ್ಕೇರಿತ್ತು. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಗೂ ಭಾರತ ತಂಡ ಪ್ರವೇಶಿಸಿತ್ತು.
’ತಂಡದಲ್ಲಿದ್ದ ಪ್ರತಿಭಾನ್ವಿತ ಆಟಗಾರರೊಂದಿಗೆ ಕಾರ್ಯನಿರ್ವಹಿಸಿದ್ದು ಒಳ್ಳೆಯ ಅನುಭವವಾಗಿತ್ತು. ಆ ಸ್ಥಾನವನ್ನು ನಿರ್ವಹಿಸಿದ್ದು ಖುಷಿ ತಂದಿದೆ. ಅದೊಂದು ಅವಿಸ್ಮರಣೀಯವಾದ ಸಮಯ. ಆಟದಿಂದ ನಿವೃತ್ತಿಯಾಗಿ ಬಹಳ ಸಮಯದ ನಂತರ ಕೋಚ್ ರೂಪದಲ್ಲಿ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಇರುವ ಅವಕಾಶ ಒದಗಿತ್ತು‘ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಅಡುವ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಈಗ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ.