ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಈ ಮಾಸಾಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಬೆಳೆಸಲಿದೆ.
ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಅದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಆಡಲಿದೆ.
ಐಪಿಎಲ್ ತಂಡಗಳಿಗಾಗಿ ಬಿಸಿಸಿಐ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಅದರ ಅನ್ವಯ ಆರ್‌ಸಿಬಿ ತಂಡ, ಪ್ರ ಯಾಣಕ್ಕೂ ಮುನ್ನ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ಪೂರೈಸಲಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಆಟಗಾರರನ್ನು ಮುಂಬೈನ ಹೋಟೆಲ್‌ನಲ್ಲಿ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಯುಎಇಗೆ ತೆರಳುವ ಮುನ್ನ ಕೆಲವು ದಿನಗಳ ಅಭ್ಯಾಸ ಶಿಬಿರವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.
ಸದ್ಯ ನಮ್ಮ ಆಟಗಾರರು ಮತ್ತು ಸಿಬ್ಬಂದಿಗೆ ಗೃಹಬಂಧನಕ್ಕಾಗಿ ಹೇಳಲಾಗಿದೆ. ಶೀಘ್ರದಲ್ಲಿಯೇ ಹೋಟೆಲ್ ಕ್ವಾರಂಟೈನ್‌ಗೂ ಒಳಪಡಿಸಲಾಗುವುದು. ಈ ತಿಂಗಳ ಅಂತ್ಯದಲ್ಲಿ ಯುಎಇಗೆ ತೆರಳುವ ಕುರಿತು ಯೋಚಿಸಿದ್ದೇವೆ’ ಎಂದು ಆರ್‌ಸಿಬಿ ಮುಖ್ಯಸ್ಥ ಸಂಜಯ್ ಚೂರಿವಾಲಾ ಅವರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಆಗಸ್ಟ್ 14ರಿಂದಲೇ ಹೋಟೆಲ್ ಕ್ವಾರಂಟೈನ್ ಆರಂಭವಾಗುವ ಸಾಧ್ಯತೆ ಇದೆ. ಆದರೆ ಇದರಲ್ಲಿ ವಿದೇಶಿ ಆಟಗಾರರು ಇರುವುದಿಲ್ಲ. ಅವರೆಲ್ಲರೂ ತಮ್ಮ ದೇಶಗಳಿಂದ ನೇರವಾಗಿ ಯುಎಇಗೆ ತೆರಳುವರು.